द्वितीय पी यू सी

ಅನುರಾಗೋದಯ 

ಕನ್ನಡ ಕಾದಂಬರಿ  ಮಹಾಶ್ವೇತಾ ವೃತ್ತಾಂತ . 

ಇಲ್ಲಿ ಅನುರಾಗೋದಯ ಪಾಠಕ್ಕೆ ಸಂಬಂಧ ಪಟ್ಟಂತಹ ನಾಗವರ್ಮನ ಕನ್ನಡ ಕಾದಂಬರಿಯ ಭಾಗವನ್ನು ಯಥಾಶಕ್ತಿ ಕೊಡಲಾಗಿದೆ . 


 ೧. ಎಲೈ ರಾಜವಂಶಕ್ಕೆ ತಿಲಕಪ್ರಾಯನಾದ ರಾಜಕುಮಾರನೆ, ಸ್ವರ್ಗಲೋಕದಲ್ಲಿ ಅಪ್ಸರಸರೆಂಬ ಹೆಂಗಸರಿರುವುದು ನಿಮಗೂ ತಿಳಿದ ವಿಷಯವೇ ಆಗಿದೆ. ಅವರಲ್ಲಿ ಹದಿನಾಲ್ಕು ಬುಡಕಟ್ಟುಗಳಿವೆ. ಅವು ಬೇರೆ ಬೇರೆ ಮೂಲಗಳಿಂದ ಹುಟ್ಟಿ ಆಯಾಯಾ ಹೆಸರಿನಿಂದ ಪ್ರಸಿದ್ಧವಾಗಿವೆ. ವ|| ಅದು ಹೇಗೆಂದರೆ ೨. ಭೂಮಿಯಿಂದ, ಸಮುದ್ರದಿಂದ ಚಂದ್ರನಿಂದ್ವ, ವಾಯುವಿನಿಂದ, ಸೂರ್ಯನಿಂದ, ಅಮೃತದಿಂದ, ಮೃತ್ಯುವಿನಿಂದ, ಬ್ರಹ್ಮನಿಂದ, ಮನ್ಮಥನಿಂದ, ನೀರಿನಿಂದ, ವೇದಗಳಿಂದ, ಮಿಂಚಿನಿಂದ, ಅಗ್ನಿಯಿಂದ, || ಅದಲ್ಲದೆ ದಕ್ಷ ಬ್ರಹ್ಮನಿಂದ ಹುಟ್ಟಿದ ಮುನಿ, ಅರಿಷ್ಟೆ ಎಂಬ ಇಬ್ಬರು ಹೆಣ್ಣುಮಕ್ಕಳಿಂದ ಗಂಧರ್ವರ ವಂಶವು ಉದಯಿಸಿತು. ಅಲ್ಲಿ ಚಿತ್ರಸೇನನೇ ಮೊದಲಾದ ಹದಿನೈದು ಜನರಿಗೆ ಹಿರಿಯವನೆನಿಸಿಕೊಂಡ, ೩. ಚಿತ್ರರಥನೆಂಬವನು ಮುನಿಯೆಂಬವಳಲ್ಲಿ ಮಗನಾಗಿ ಹುಟ್ಟಿದನು. ಅವನು ಗಂಧರ್ವರಿಗೆ ರಾಜನಾದನು. ಅಲ್ಲದೆ ದೇವೇಂದ್ರನಿಗೂ ಗೆಳೆಯನೆನಿಸಿದ ಹಿರಿಮೆಯನ್ನು ಪಡೆದಿದ್ದನು. ಅವನ ಕೀರ್ತಿಯು ಮೂರುಲೋಕಗಳಲ್ಲೂ ಹರಡಿತ್ತು. ವ|| ಆ ಚಿತ್ರರಥನಿಂದ ಚೈತ್ರರಥವೆಂಬ ಉದ್ಯಾನವನವೂ ಅಚ್ಛೋದವೆಂಬ ದೊಡ್ಡಸರೋವರವೂ ನಿರ್ಮಿಸಲ್ಪಟ್ಟಿತು. ಅದಲ್ಲದೆ ತುಂಬುರು ಮೊದಲಾದ ಆರು ಜನರಿಗಿಂತಲೂ ದೊಡ್ಡವನಾಗಿ,

೪. ಅರಿಷ್ಟೆಯೆಂಬುವಳಿಗೆ ಪುರುಷಾರ್ಥಗಳಿಗೆ ಆಶ್ರಯಸ್ಥಾನನಾದ, ದೇವೇಂದ್ರನಿಗೆ ಆಪ್ತಮಿತ್ರನೆನಿಸಿರುವ ಮತ್ತು ಚಿತ್ರರಥನ ಮುಖವೆಂಬ ಬಿಳಿದಾವರೆಗೆ ಸೂರ್ಯನಂತಿರುವ ಹಂಸನೆಂಬ ಮಗನೊಬ್ಬನು ಹುಟ್ಟಿದನು. (ಟಿ|| ಧರ್ಮ, ಅರ್ಥ, ಕಾಮ, ಮೋಕ್ಷಗಳು ಪುರುಷಾರ್ಥ). ವ|| ಅದಲ್ಲದೆ ಅಲ್ಲಿಗೆ ಸ್ವಲ್ಪ ದೂರದಲ್ಲಿ ಕಿಂಪುರುಷರಿಗೆ ವಾಸಸ್ಥನವಾದ ಹೇಮಕೂಟವೆಂಬ ಪರ್ವತವಿದೆ. ಅಲ್ಲಿ ಕೀರ್ತಿವಂತರಾದ, ಗಂಧರ್ವರ ವಂಶದಲ್ಲಿ ಶ್ರೇಷ್ಠರಾಗಿರುವ, ಸರ್ವಗುಣ ಸಂಪ್ಭನ್ನರಾದ ಆ ಚಿತ್ರರಥ, ಹಂಸ ಎಂಬುವರು ರಾಜ್ಯಭಾರ ಮಾಡುತ್ತಾ ಇಬ್ಬರೂ ಪರಸ್ಪರ ಸುಖಸಲ್ಲಾಪಗೈಯುತ್ತ ಸಂತೋಷವಾಗಿದ್ದರು. ವ|| ಚಂದ್ರಕಿರಣಗಳಿಂದ ಹುಟ್ಟಿದ ಅಪ್ಸರಸ್ತ್ರೀಯರಲ್ಲಿ ೬. ಚಂದ್ರನಂತೆ ಮುಖವುಳ್ಳ ಗೌರಿಯೆಂಬುವಳು ಹುಟ್ಟಿದಳು. ಅವಳು ಚಂದ್ರನ ಪ್ರಕಾಶಮಾನವಾದ ಮತ್ತು ಮಹಾಸುಂದರವಾದ ಕಳೆಗಳ ಸೌಂದರ್ಯದ ಪ್ರವಾಹದಿಂದ ಹುಟ್ಟಿರುವಳೋ ಎಂಬಂತೆ ಶೋಭಿಸುತ್ತಿದ್ದಳು. ೭. ಕ್ಷೀರಸಮುದ್ರಕ್ಕೆ ದೇವಗಂಗಾನದಿಯ ಸಹವಾಸವು ಉಂಟಾದಂತೆ ಗಂಧರ್ವಕುಲಶ್ರೇಷ್ಠನೆಂದು ಪ್ರಸಿದ್ಧಿಪಡೆದಿರುವ ಹಂಸನಿಗೆ ಗೌರಿಯೊಂದಿಗೆ ವಿವಾಹಮಹೋತ್ಸವವು ಜರುಗಿತು. ೮. ಸರಿಸಮಾನವಾದ ಕುಲದಿಂದಲೂ, ರೂಪದಿಂದಲೂ, ಸಂಪತ್ತಿನಿಂದಲೂ, ವಯಸ್ಸಿನ ಬೆಡಗಿನಿಂದಲೂ, ಏಕಭಾವವನ್ನು ಹೊಂದಿರುವ ಮನಸ್ಸಿನಿಂದಲೂ, ಸಮಾನವಾದ ಪ್ರೀತಿಯಿಂದ ಶೋಭಿಸುವ ತರುಣ ದಂಪತಿಗಳು ನವತಾರುಣ್ಯದಲ್ಲಿ ಒದಗಿಬಂದ ದಾಂಪತ್ಯಸುಖವನ್ನು ಅನುಭವಿಸುತ್ತಿದ್ದರು. ೯. ರಾಜಕುಮಾರ, ನಾನು ಏನು ಹೇಳಲಿ? ಆ ಮಹಾತ್ಮರಾದ ತಾಯಿತಂದೆಗಳಿಗೆ ದುರದೃಷ್ಟವಂತಳಾದ, ಶರೀರವನ್ನು ತಾಳಿದ ಪಾಪಸಮೂಹದಂತಿರುವ, ದುಖಪಾತ್ರಳಾದ ನಾನು ಮಗಳಾಗಿ ಹುಟ್ಟಿದೆನು. ಗಂಧರ್ವರಾಜನಾದ ನನ್ನ ತಂದೆಯು ನನ್ನನ್ನು ನೋಡಿ ಬಹಳ ಪ್ರೀತಿಯಿಂದ ಮಹಾಶ್ವೇತೆಯೆಂದು ಹೆಸರಿಟ್ಟನು. ವ|| ನನ್ನ ತಾಯಿತಂದೆಗಳಿಗೆ ಬಹಳ ಕಾಲ ಮಕ್ಕಳಿರಲ್ಲಿಲ್ಲ. ಆದ್ದರಿಂದ ಮಗನಿಗಿಂತಲೂ ಮಿಗಿಲಾಗಿ ಪರಮಪ್ರೀತಿಯಿಂದ ನನ್ನನ್ನು ಸಲಹುತ್ತಿದ್ದರು. ಕೆಲವು ದಿವಸಗಳಲ್ಲಿ ಪ್ರೀತಿ, ದುಖ, ಶ್ರಮ, ಇವೊಂದರ, ಅರಿವೂ ಇಲ್ಲದ ಬಾಲ್ಯವು ಕಳೆಯಲಾಗಿ ೧೦. ವಸಂತಋತವು ಕಳಕಳಿಸುವಚೈತ್ರಮಾಸದಿಂದ ಶೋಭಿಸುವಂತೆಯೂ, ಚೈತ್ರಮಾಸವು ಮರದ ಚಿಗುರುಗಳಿಂದ ಶೋಭಿಸುವಂತೆಯೂ, ಚಿಗುರು ಹೂಗಳಿಂದ ಶೋಭಿಸುವಂತೆಯೂ, ಹೂವಿನ ಗೊಂಚಲು ಪ್ರಕಾಶಿಸುವ ದುಂಬಿಸಾಲುಗಳಿಂದ ಶೋಭಿಸುವಂತೆಯೂ ನನ್ನ ಶರೀರದಲ್ಲಿ ಹರೆಯದ ಬೆಡಗು ಕ್ರಮಕ್ರಮವಾಗಿ ಹೆಚ್ಚಿ ಶೋಭಿಸತೊಡಗಿತು. ವ|| ಆಮೇಲೆ ೧೧. ಕಾಮಪರವಶತೆಯಿಂದ ಉಂಟಾದ ಅವಿವೇಕದಿಂದ ಹಗಲಿನಲ್ಲೂ ವ್ಯಭಿಚಾರಿಣಿಯರ ಚೆಲ್ಲಾಟವು ಹೆಚ್ಚುತ್ತಿರಲು, ವಿರಹಪೀಡಿತರಾದ ಜನರನ್ನು ಕಬಳಿಸಿ (ಕೊಂದು) ಮನ್ಮಥನು ತೃಪ್ತಿಹೊಂದುತ್ತಿರಲು, ಕಾಮಬಾಣಗಳ ಟಂಕಾರದಿಂದ ಸೀಳಿಹೋದ ಪ್ರಯಾಣಿಕರ ಎದೆಯ ರಕ್ತವು ದಾರಿಯಲ್ಲೆಲ್ಲಾ ಚೆಲ್ಲಾಡುತ್ತಿರಲು ಶಿಶಿರಋತುವೆಂಬ ರಾಜನಿಗೆ ಮೃತ್ಯುವಿನಂತಿರುವ ಮಸಂತ ಋತುವು ಬಂದಿತು. ವ|| ಹಾಗೆ ಬಂದ ವಸಂತಋತುವಿನಲ್ಲಿ ಚೆನ್ನಾಗಿ ಅರಳಿರುವ ಹೊಸದಾದ ನಳಿನ, ಕುಮುದ, ಕುವಲಯ, ಕಲ್ಹಾರವೆಂಬ ನೀರುಹೂವುಗಳಿಂದ ಶೋಭಿಸುವ ಅಚ್ಛೋದಸರೋವರಕ್ಕೆ ತಾಯಿಯ ಜೊತೆಯಲ್ಲಿ ಸ್ನಾನ ಮಾಡಲು ಬಂದು ನೋಡುತ್ತಿರಲಾಗಿ, ಪಾರ್ವತಿದೇವಿಯು ಪೂಜೆಗಾಗಿ ದಡದಲ್ಲಿರುವ ಹಾಸರೆಯ ಮೇಲೆ ಬರೆದಿರುವ ಪರಮೇಶ್ವರನ ಪ್ರತಿಕೃತಿಯನ್ನು ನೋಡಿ ನಮಸ್ಕರಿಸಿ ಆ ಸರೋವರದ ತೀರಪ್ರದೇಶದಲ್ಲಿ. (ಟಿ) ಕುಮುದ = ಬಿಳಿಕಮಲ. ಕುವಲಯ = ನೀಲಕಮಲ, ಕಲ್ಹಾರ= ಕೆಂಪುಕಮಲ) ೧೨. ಇದು ಮದವೇರಿದ ದುಂಬಿಗಳಿಂದ ವ್ಯಾಪ್ತವಾದ ಹೂವುಗಳಿಂದ ಸುಂದರವಾದ ಬಳ್ಳಿಗಳ ಪೊದರು. ಇಂದು ಕೋಕಿಲೆಗಳ ಕೊಕ್ಕುಗಳಿಂದ ಸೀಳಲ್ಪಟು ರಸವು ಸೋರುತ್ತಿರುವ ಮೊಗ್ಗುಗಳಿಂದ ಕೂಡಿರುವ ಸಿಹಿಮಾವಿನ ಮರದ ಗುಂಪು. ಇದು ನವಿಲುಗಳ ಧ್ವನಿಯನ್ನು ಕೇಳಿ ಹೆದರಿರುವ ಹಾವುಗಳಿಂದ ಬಿಡಲ್ಪಟ್ಟಿರುವ ಗಂಧದ ಮರದ ಹಿಂಡಿಲು ಎಂದು ಬಹಳ ಆಸಕ್ತಿಯಿಂದ ಅವುಗಳನ್ನೆಲ್ಲಾ ನೋಡುತ್ತಾ ಸಂಚರಿಸುತ್ತಿರಲಾಗಿ, ೧೩. ಅಲ್ಲಿ ಒಂದು ಕಡೆಯಿಂದ ಮೂಗಿಗೆ ಪರಮಾನಂದವನ್ನುಂಟು ಮಾಡುವ, ದುಂಬಿಗಳ ಗುಂಪಿನಿಂದ ಕೂಡಿಕೊಂಡಿರುವ ಕಾಡಿನ ಗಾಳಿಯಿಂದ ತರಲ್ಪಟ್ಟ ಹೂವಿನ ದಿವ್ಯ ಪರಿಮಳವು ಬೇರೆ ಹೂವುಗಳ ವಾಸನೆಯನ್ನೆಲ್ಲಾ ಮುಚ್ಚಿ ಹರಡುತ್ತಾ ಬರುತ್ತಿತ್ತು. ವ|| ಹಾಗೆ ಬರುತ್ತಿರುವ ದೇವಲೋಕೋಚಿತವಾದ, ಹಿಂದೆಂದೂ ವಾಸನೆ ನೋಡದಿರುವ ಆ ಹೂವಿನ ಕಂಪನ್ನು ಆಘ್ರಾಣಿಸುತ್ತ ಇದು ಎಲ್ಲಿಂದ ಬಂತು? ಎಂದು ಆಶ್ಚರ್ಯವು ಹೆಚ್ಚುತ್ತಿರಲು ಅದರ ದಾರಿಯನ್ನೇ ಹಿಡಿದು, ೧೪. ಕಾಲ್ಗಡಗದ ಇಂಪಾದ ಧ್ವನಿಗೆ ರಾಜಹಂಸಗಳು ಜೊತೆಯಲ್ಲಿ ಬರುತ್ತಿರಲು, ನಾನು ಮುಂದೆಹೋಗುತ್ತಿದ್ದೆನು. ಅಲ್ಲಿ ಸ್ವಲ್ಪ ದೂರದಲ್ಲಿ ಒಬ್ಬ ಮುನಿಕುಮಾರನು ಸ್ನಾನಮಾಡುವುದಕ್ಕಾಗಿ ಸರೋವರಕ್ಕೆ ಬರುತ್ತಿದ್ದನು. ೧೫. ಪರಮೇಶ್ವರನ ಹಣೆಗಣ್ಣಿನ ಕಿಚ್ಚಿನಿಂದ ಮನ್ಮಥನು ಸುಟ್ಟು ಹೋಗಲಾಗಿ ಒದಗಿದ ಮಿಗಿಲಾದ ದುಖದಿಂದ ಬದುಕಿಸುವುದಕ್ಕಾಗಿ ತಪಸ್ಸುಮಾಡುತ್ತಿರುವ ಮನ್ಮಥನ ಗೆಳೆಯನಾದ ವಸಂತನಂತೆ ಸುಂದರಾಕಾರನಾದ ಮುನಿಕುಮಾರನು ಬಹಳ ಚೆನ್ನಾಗಿ ಶೋಭಿಸುತ್ತಿದ್ದನು. ವ|| ಮತ್ತೆ ೧೬. ಸಂಪೂರ್ಣ ಬಿಂಬದ ಭಾಗ್ಯವನ್ನು ಪಡೆಯಬೇಕೆಂಬ ಒಂದು ಆಸೆಯಿಂದ ದೊಡ್ಡ ಮುನಿವ್ರತವನ್ನು ತಾಳಿರುವ ಪರಮೇಶ್ವರನ ತಲೆಯ ಮೇಲಿನ ಚಂದ್ರನೋ ಎಂಬಂತೆ ಆ ಋಷಿಪುತ್ರನು ಶೋಭಿಸಿದನು. ವ|| ಅದಲ್ಲದೆ, ೧೭. ಶರೀರದ ಕಾಂತಿಯು ಅವನನ್ನು ಸುತ್ತಲೂ ಆವರಿಸಿಕೊಂಡಿದ್ದಿತು. ಅದರಿಂದ ಉರಿಯುತ್ತಿರುವ ಬೆಂಕಿಯ ಜ್ವಾಲೆಯ ಮಧ್ಯದಲ್ಲಿರುವವನಂತೆಯೂ, ಪ್ರಕಾಶಿಸುತ್ತಿರುವ ಬಳ್ಳಿಮಿಂಚುಗಳ ಒಳಗಿರುವವನಂತೆಯೂ ಕಾಣುತ್ತಿದ್ದನು. ಅದರಿಂದ ಅವನ ಸ್ವರೂಪವನ್ನು ಚೆನ್ನಾಗಿ ತಿಳಿದುಕೊಳ್ಳಲಾಗುತ್ತಿರಲಿಲ್ಲ. ೧೮. ದೀಪವನ್ನು ಹಚ್ಚಿಟ್ಟಂತೆ ಸೊಬಗನ್ನು ಪಡೆದು ಶೋಭಿಸುವ ಆ ಋಷಿಯ ಶರೀರದ ಕಾಂತಿಯಿಂದ. ಹೆಚ್ಚಾದ ಪಿಂಗಳವರ್ಣವನ್ನು (ಹಳದಿಮಿಶ್ರಕೆಂಪು) ಹೊಂದಿರುವ ಆ ಕಾಡು ಚಿನ್ನದ ಕಾಡಿನಂತೆ ಸೊಗಸಾಗಿತ್ತು. ೧೯. ಆ ಮುನಿಕುಮಾರನ ಪ್ರಕಾಶಮಾನವಾದ ಕೆಂಜೆಡೆಗಳನ್ನು ನೋಡಿದರೆ ಗೋರೋಚನರಸದಿಂದ ತೋಯಿಸಿದ ಹತ್ತಿಯ ಮಂಗಳ ಸೂತ್ರದಂತೆ ರಂಜಿಸುತ್ತಿದ್ದುವು. ೨೦. ಮೊದಲು ವಿದ್ಯಾದೇವಿಯನ್ನು ಒಲಿಸಿಕೊಳ್ಳುವ ಶುಭಸಮಯದಲ್ಲಿ ಧರಿಸಿರುವ (ಗಂಧದ) ತಿಲಕವೋ ಎಂಬಂತಿರುವ ಹೊಸದಾದ ವಿಭೂತಿಯ ತಿಲಕವು ಹಣೆಯಲ್ಲಿ ಶೋಭಿಸುತ್ತಿರಲು, ಅವನು ಮರಳುಸಾಲುಗಳಿಂದ ಕೂಡಿಕೊಂಡಿರುವ ಗಂಗಾನದಿಯ ಪ್ರವಾಹವನ್ನು ತಕ್ಕಮಟ್ಟಿಗೆಹೋಲುತ್ತಿದ್ದನು. ೨೧. ಆ ಮುನಿಕುಮಾರನ ದೀರ್ಘವಾದ ಕಣ್ಣುಗಳು ಬಹಳ ಸುಂದರವಾಗಿದ್ದುದರಿಂದ ಕಾಡಿನ ಜಿಂಕೆಗಳೆಲ್ಲವೂ ತಮ್ಮತಮ್ಮ ಕಣ್ಣುಗಳ ಸೌಂದರ್ಯದ ಒಂದೊಂದು ಅಂಶವನ್ನು ಕೊಟ್ಟಿರುವಂತೆಯೂ, ಕಣ್ಣುಗಳನ್ನೇ ಸೇರಿಸಿ ಕಟ್ಟಿರುವ ನೀಳವಾದ ಮಾಲಿಕೆಯಂತೆಯೂ ಶೋಭಿಸುತ್ತಿದ್ದುವು. ೨೨. ನವತಾರುಣ್ಯದಿಂದ ಉಂಟಾದ ರಾಗವು (ಅನುರಾಗ, ಕೆಂಪು) ಮನಸ್ಸನ್ನು ಪ್ರವೇಶಿಸಲು ಆಗದಿದ್ದುದರಿಂದ ಹೊರಗೆ ನಿಂತಿದೆಯೋ ಎಂಬಂತೆ ಅವನ ಪದ್ಮರಾಗಮಣಿಯಂತಿರುವ ಕೆಂದುಟಿಯು ಹಣ್ಣಾದ ತೊಂಡೆಹಣ್ಣಿನ ಕಾಂತಿಯನ್ನು ಪ್ರತಿಭಟಿಸುತ್ತಿತ್ತು. (ಅದರ ಕಾಂತಿಗಿಂತಲೂ ಮಿಗಿಲಾದ ಕಾಂತಿಯುಳ್ಳದ್ದಾಗಿತ್ತು) ಟಿ. ಕವಿಸಮಯದಲ್ಲಿ ಅನುರಾಗವು ಕೆಂಪುಬಣ್ಣವುಳ್ಳದ್ದು. ಅದರಿಂದ ಕೆಂದುಟಿಯನ್ನು ಹೊರಗಿರುವ ಅನುರಾಗವೆಂದು ವರ್ಣಿಸಿದ್ದಾನೆ. ೨೩. ಇನ್ನೂ ಮೀಸೆ ಮೂಡದಿರುವ ಅವನ ತಾವರೆಯಂದದ ಮುಖವು ಅಂದವಾಗಿ ಇನ್ನೂ ಮರಿದುಂಬಿಗಳು ಎರಗದಿರುವ ಹೊಂದಾವರೆಯನ್ನು ನೆನಪಿಗೆ ತರುತ್ತಿತ್ತು. ಟಿ|| ಇಲ್ಲಿ ಆಗತಾನೆ ಅರಳುತ್ತಿರುವ ಹೊಂದಾವರೆ ಎಂದು ತಿಳಿಯಬೇಕು. ೨೪. ಆ ಮುನಿಕುಮಾರನ ಬಹಳ ಶುಭ್ರವಾದ ಯಜ್ಞೋಪವೀತವು ಮನ್ಮಥನ ಬಿಲ್ಲಿನ ನಾಣಿನಂತೆಯೂ, ಮಹಾತಪಸ್ಸೆಂಬ ಕೆರೆಯಲ್ಲಿ ಬೆಳೆದಿರುವ ತಾವರೆಯ ದಂಟಿನ ದಾರಗಳಂತೆಯೂ ಶೋಭಿಸುತ್ತಿತ್ತು. ೨೫. ಆ ಮುನೀಶ್ವರನ ಒಂದು ಕೈಯಲ್ಲಿದ್ದ ಸಟಿಕಮಯವಾದ ಕಮಂಡಲು ತೊಟ್ಟಿನಿಂದ ಕೂಡಿಕೊಂಡಿರುವ ವಕುಳಫಲದಂತೆ ಕಾಣುತ್ತಿತ್ತು. ಚಿಗುರಿನಂತೆ ಮೃದುವಾದ ಮತ್ತೊಂದು ಕೈಯಲ್ಲಿದ್ದ ಸ್ವಚ್ಛವಾದ ಸಟಿಕದ ಜಪಸರವು ಮನ್ಮಥನ ವಿನಾಶದಿಂದ ಅಳುತ್ತಿರುವ ರತೀದೇವಿಯ ಕಣ್ಣುಗಳಿಂದ ಉದುರುತ್ತಿರುವ ಕಂಬನಿಗಳಂತೆ ರಮಣೀಯವಾಗಿ ಕಾಣುತ್ತಿತ್ತು. ೨೬. ಆ ಮುನಿಕುಮಾರನ ಸುರುಳಿ ಸುತ್ತಿಕೊಂಡಿರುವ ಸುಂದರವಾದ ಹಾಗೂ ಆಳವಾದ ಹೊಕ್ಕಳು ಪರಿಶುದ್ಧವಾದ ಸಮಸ್ತ ವಿದ್ಯೆಗಳೆಂಬನದಿಗಳ ಸಂಗಮದಲ್ಲಿ ತೋರುವ ಸುಳಿಯಂತೆ ಶೋಭಿಸುತ್ತಿತ್ತು. ೨೭. ದೇವಲೋಕದ ಮಂದಾರವೃಕ್ಷದ ನಾರುಗಳಿಂದ ನಿರ್ಮಿಸಿರುವ ಮತ್ತು ಹೊಸದಾಗಿರುವ, ದೇವಗಂಗಾನದಿಯಲ್ಲಿ ಒಗೆದು ಮಡಿಮಾಡಿರುವ, ಮುದಿಚಕೋರಪಕ್ಷಿಯ ಕಣ್ಣಿನಂತೆ ಸುಂದರವಾದ ಅತ್ಯುತ್ತಮವಾದ ಪಂಚೆಯು ಒಪ್ಪವಾಗಿ ಶೋಭಿಸುತ್ತಿತ್ತು. ವ|| ಅದಲ್ಲದೆ ಅವನು ಬ್ರಹ್ಮಚರ್ಯವ್ರತಕ್ಕೆ ಅಲಂಕಾರರೂಪನಾಗಿಯೂ, ಧರ್ಮಕ್ಕೆ ಹೊಸಹರೆಯದಂತೆಯೂ, ಸರಸ್ವತಿಗೆ ವಿನೋದದ ಬೆಡಗಿನಂತೆಯೂ, ವಿದ್ಯೆಗಳೆಂಬ ಲಲನೆಯರಿಗೆ ಸ್ವಯಂವರದ ಪತಿಯಂತೆಯೂ, ಸಮಸ್ತ ವೇದಗಳಿಗೂ ಸಂಕೇತಸ್ಥಾನವಾದಂತೆಯೂ (ಸೇರಲು ಗೊತ್ತುಮಾಡಿಕೊಂಡಿರುವ ಸ್ಥಳ) ಇದ್ದನು. ೨೮. ಅವನಿಗೆ ಸರಿಸಮಾನನಾದ ಮತ್ತೊಬ್ಬ ತರುಣ ಮುನಿಯು ದೇವರ ಪೂಜೆಗಾಗಿ ಈ ಕಾಡಿಗೆ ಬಂದು ಹೊಸಹೂವುಗಳನ್ನು ಆಸೆಯಿಂದ ಆರಿಸಿ ಕೊಯ್ಯುತ್ತಾ ಅವನ ಹಿಂದೆಯೇ ಬರುತ್ತಿದ್ದನು. ಎಲೈ ರಾಜನೆ, ಹೀಗೆ ಈ ಕಾಡಿನ ಒಳಗಿರುವ ಸರೋವರಕ್ಕೆ ಸ್ನಾನಕ್ಕಾಗಿ ಮೆಲ್ಲನೆ ಬರುತ್ತಿದ್ದ ಆ ಋಷಿಕುಮಾರನನ್ನು ನಾನು ಬಿಡದೆ ನೋಡಿದೆನು. ವ|| ಹಾಗೆ ನೋಡುತ್ತಿರಲಾಗಿ ೨೯. ಆಗ ನಾನು ಆ ಮುನಿಯ ಕಿವಿಯ ಮೇಲೆ ಇಟ್ಟುಕೊಂಡಿದ್ದ ಹೂವಿನ ಗೊಂಚಲನ್ನು ಬಹಳ ಆಶ್ಚರ್ಯದಿಂದ ನೋಡಿದೆನು. ಅದು ಮನ್ಮಥನ ಮಡದಿಯಾದ ರತಿಯ ಸಂಭೋಗಕಾಲದಲ್ಲಿ ಉಂಟಾದ ಬೆವರುಹನಿಗಳ ಗುಂಪಿನಂತೆಯೂ, ಮನ್ಮಥನೆಂಬ ಮದ್ದಾನೆಯ ಚಾಮರದಂತೆಯೂ, ವನಲಕ್ಷಿ ಯ ಮಂದಹಾಸದಂತೆಯೂ, ಮಂದಮಾರುತವು ದಕ್ಷಿಣದ ಕಡೆಯಿಂದ ಬರಲಾಗಿ ಚೈತ್ರಮಾಸವು ನೀಡುವ ಸ್ವಾಗತಕಾಲದ ಅರ್ಘ್ಯದಲ್ಲಿರುವ ಅರಳುಗಳಂತೆಯೂ ಶೋಭಿಸುತ್ತಿತ್ತು. ೩೦. ಮೊರೆಯುತ್ತಿರುವ ಹಾಗೂ ಮದವೇರಿದ ದುಂಬಿಸಾಲುಗಳ ತಂಡವು ಬೆನ್ನಟ್ಟಿಕೊಂಡು ಬಂದ ಹೊಸಕಂಪು ಈ ಹೂವಿನ ಗೊಂಚಲಿನಿಂದಲೇ ಬಂದಿರಬೇಕೆಂದು ನಾನುಮಾಡುವ ಕಮಲಗಳನ್ನೂ, ಕಣ್ಣುಗಳಿಗೆ ಹಬ್ಬವನ್ನುಂಟುಮಾಡುವ ಚಂದ್ರಮಂಡಲವನ್ನೂ ಬ್ರಹ್ಮನು ಮೊದಲು ಸೃಷ್ಟಿಮಾಡಿ ಆಮೇಲೆ ಈ ಸುಂದರವಾದ ಮುಖವನ್ನು ಸೃಷ್ಟಿಮಾಡಿದ್ದಾನೆ. ಹೀಗೆ ಒಂದೇ ಬಗೆಯ ವಸ್ತುಗಳನ್ನು ಮತ್ತೆ ಮತ್ತೆ ಮಾಡುವುದಕ್ಕೆ ಬ್ರಹ್ಮನೇನೂ ದಡ್ಡನಲ್ಲ. ಈ ಮುಖವನ್ನು ಸೃಷ್ಟಿಮಾಡುವುದಕ್ಕೆ ಮೊದಲು ಮಾದರಿಗಾಗಿ ಅವುಗಳನ್ನು ನಿರ್ಮಿಸಲು ಪ್ರಾರಂಭಿಸಿ ಚೆನ್ನಾಗಿ ಅಭ್ಯಾಸಮಾಡಿಕೊಂಡನು. ಕೈಕುದುರಿದ ಮೇಲೆ ಈ ಮುನಿಕುಮಾರನ ಮುಖವನ್ನು ಸೃಷ್ಟಿಮಾಡಿದ್ದಾನೆ. (ಟಿ|| ಇವನ ಮುಖವು ಅವರೆಡಕ್ಕಿಂತ ಹೆಚ್ಚು ರಮಣೀಯವಾಗಿದೆ ಎಂದು ತಾತ್ಪರ್ಯ) ವ|| ಮತ್ತು ೩೨. ಸೂರ್ಯನು ಕೃಷ್ಣಪಕ್ಷದಲ್ಲಿ ಸುಷಮ್ನೆ ಎಂದು ಹೆಸರುಳ್ಳ ತನ್ನ ಕಿರಣದಿಂದ ಚಂದ್ರನ ಕಲೆಗಳನ್ನು ಕುಡಿಯುತ್ತಾನೆಎಂದು ಪುರಾಣಗಳಲ್ಲಿ ಹೇಳಿದೆಯಲ್ಲವೆ? ಅದು ಸುಳ್ಳು. ನಾನು ಹೇಳುವುದನ್ನು ಕೇಳಿ. ಆ ಚಂದ್ರನ ಕಾಂತಿಗಳೆಲ್ಲವೂ ಈ ಮುನಿಕುಮಾರನ ಶರೀರದಲ್ಲಿ ಸೇರಿಕೊಳ್ಳುತ್ತಿವೆ. ಇದು ಖಂಡಿತ. ಹಾಗಿಲ್ಲದಿದ್ದರೆ ಈ ಸುಂದರವಾದ ಶರೀರವು ತಪಸ್ಸುಮಾಡುವ ಈ ಸಮಯದಲ್ಲೂ ಇಷ್ಟು ಕಾಂತಿಯನ್ನು ಹೊಂದುತ್ತದೆಯೇ? || ಎಂದು ಅವನ ಸೌಂದರ್ಯವೊಂದರಲ್ಲೇ ಮುಖ್ಯವಾಗಿ ಅಭಿಮಾನವನ್ನು ಹೊಂದಿರಲಾಗಿ ೩೩. ಹೀಗೆ ಹೊಸಹರಯದಲ್ಲಿ ಗುಣದೋಷವಿಚಾರವನ್ನು ಮಾಡಲು ಅವಕಾಶವನ್ನು ಕೊಡದ ಮನ್ಮಥನಿಂದ ಹೊಸಹೂವಿನ ರಸವನ್ನು ಕುಡಿದು ಸೊಕ್ಕಿದ ಹೆಣ್ಣುದುಂಬಿಯಂತೆ ಪರವಶಳಾದೆನು. ವ|| ಬಳಿಕ ಉಸಿರು ಬಿಡುವುದರೊಂದಿಗೆ ರೆಪ್ಪೆ ಹೊಡೆಯುವುದನ್ನೂ ಮರೆತು ಮೇಲೆ ಬೀಳಲು ಆತುರಪಟ್ಟು ಕಳವಳಗೊಂಡು ವಕ್ರವಾಗಿ ಅವನನ್ನು ಸುತ್ತುಗಟ್ಟಿ ನೋಡಲು ಆಸೆಪಡುವ ಕಣ್ಣುಗಳಿಂದ ಅವನ ಸೌಂದರ್ಯರಸವನ್ನು ಬಹಳ ಆಸಕ್ತಿಯಿಂದ ಅತ್ಯಕವಾಗಿ ಕುಡಿಯುವಂತೆಯೂ, ನಿನಗೆ ನಾನು ಅನಳಾಗಿದ್ದೇನೆ ಎಂಬಂತೆಯೂ, ಮನಸ್ಸನ್ನು ಅಂಗೈಯಲ್ಲಿಟ್ಟುಕೊಂಡು ತೋರಿಸುತ್ತೇನೆ ಎಂಬಂತೆಯೂ, ತನ್ಮಯತೆಯನ್ನು ಪಡೆಯಲು ಪ್ರಯತ್ನಿಸುವಂತೆಯೂ, “ಮನ್ಮಥನು ಬಾಸುತ್ತಿದ್ದಾನೆ, ನನ್ನನ್ನು ಕಾಪಾಡುಎಂಬಂತೆಯೂ, ನಿನಗೆ ಶರಣಾಗತಳಾಗಿದ್ದೇನೆ ಎಂಬಂತೆಯೂ, ನಿನ್ನ ಮನಸ್ಸಿನಲ್ಲಿ ನನಗೆ ಸ್ಥಾನವನ್ನು ಕೊಡು ಎಂದು ಅಪೇಕ್ಷೆಯನ್ನು ತೋರಿಸುವಂತೆಯೂ, ಕೇವಲ ಕೀಳುಮಟ್ಟದ ಹುಡುಗಿಯರಿಗೆ ಮಾತ್ರ ಅರ್ಹವಾದ ಬಹಳ ನಾಚಿಕೆಯನ್ನುಂಟುಮಾಡುವ ಈ ಅಪೇಕ್ಷೆಯು ನನಗೆ ತಕ್ಕುದಲ್ಲ, ಇಂತಹ ಅಯೋಗ್ಯ ಕೆಲಸವನ್ನು ಮಾಡುತ್ತಿದ್ದೇನೆಂದು ತಿಳಿದುಕೊಂಡಿದ್ದರೂ ಅತ್ಯಾಸಕ್ತಿಯಿಂದ ಸ್ತಂಭಿತರಾದವರಂತೆಯೂ, ಚಿತ್ರದಲ್ಲಿ ಬರೆಯಲ್ಪಟ್ಟವರಂತೆಯೂ, ಮೂರ್ಛೆಗೊಂಡವರಂತೆಯೂ, ಯಾರಿಂದಲೋ ಹಿಡಿಯಲ್ಪಟ್ಟವರಂತೆಯೂ ಅಲುಗಾಡದೆ ಅವನನ್ನೇ ನೋಡುತ್ತಿದ್ದೆನು. ೩೪. ಮನ್ಮಥನ ಪುಷ್ಪಬಾಣವು ನಾಟಿದಂತೆ ನನ್ನ ಶರೀರವುನಡುಗುತ್ತಿತ್ತು. ಬೆವರಿನಿಂದ ಆಗಲೇ ಚೆನ್ನಾಗಿ ತೊಳೆಯಲ್ಪಟ್ಟಂತೆ ನಾಚಿಕೆಯು ಹೊರಟುಹೋಯಿತು. ಆ ಮಹಾಪುರುಷನ ಸೌಂದರ್ಯಯನ್ನು ನೋಡುವುದಕ್ಕೋ ಎಂಬಂತೆ ರೋಮಾಂಚನವು ತಲೆಯಿಕ್ಕಿತು. ಮನ್ಮಥನ ಆಗಮನಕ್ಕೆ ಅವಕಾಶ ಮಾಡಿಕೊಡುವುದಕ್ಕೋ ಎಂಬಂತೆ ಒಳಗಿನಿಂದ ನಿಟ್ಟುಸಿರು ಒಂದೇ ಸಮನೆ ಹೊರಕ್ಕೆ ಬರುತ್ತಿತ್ತು. (ಒಳಗೆ ತುಂಬಿದ್ದ ಉಸಿರೆಲ್ಲ ಹೊರಕ್ಕೆ ಬಂದರೆ ಒಳಗೆ ಖಾಲಿಯಾಗಿ ಕಾಮನ ಪ್ರವೇಶಕ್ಕೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯ) ೩೫. ಇವು ಪ್ರಥಮವಾಗಿ ಒಟ್ಟಿಗೆ ಅನೇಕ ರೀತಿಯ ಕಾಮವಿಕಾರಗಳು ಉಂಟಾಗುತ್ತಿರಲು, ಇದಕ್ಕೆ ಮೊದಲು ಅದರ ಅನುಭವವೇ ಇಲ್ಲದವಳಾಗಿದ್ದ ನಾನು ಹೊಸದಾಗಿ ಭಯವುಂಟಾಗಲು ಸಂಕೋಚಪಟ್ಟು ತಲ್ಲಣಿಸಿಹೋದೆನು. ವ|| ಹೀಗೆ ಭಯಪಟ್ಟು ೩೬. ಭಯವೇ ಇಲ್ಲದ ಮನ್ಮಥನು 
ಜಿತೇಂದ್ರಿಯನಾದ ಮತ್ತು ಬ್ರಹ್ಮತೇಜಸ್ಸಿನಿಂದ ತುಂಬಿರುವ ಈ ಮಹರ್ಷಿಯಲ್ಲಿ ಕೇವಲ ಸೌಂದರ್ಯದ ಒಂದು ಅಭಿಮಾನದಿಂದ ನೀತಿಯನ್ನು ಸಂಪೂರ್ಣವಾಗಿ ಪರಿತ್ಯಜಿಸಿ ಈ ರೀತಿ ನಾನು ಮನಸೋಲುವಂತೆ ಮಾಡಿಬಿಡಬಹುದೆ? ೩೭. ಹೀಗೆ ನಾನು ಮೇಲೆ ಬಿದ್ದುಹೋದರೆ ಆಗ ಅವನು ಹೆಂಗಸರಿಗೆ ಪ್ರೀತಿಯುಂಟಾಗಿಬಿಟ್ಟರೆ ನೀತಿಯ ವಿಚಾರವನ್ನೆಲ್ಲಾ ಬೀಸಾಡಿ ಗಂಟುಬೀಳುತ್ತಾರೆ. ಇವಳು ಒಳ್ಳೆಯ ಮಾಯಾಂಗನೆಎಂದು ತಿಳಿದುಕೊಳ್ಳುತ್ತಾನೋ ಏನೋ; ಅಂತೂ ಮನಸ್ಸನ್ನು ಬಿಗಿಹಿಡಿಯಲು ಯಾವ ರೀತಿಯಲ್ಲಿಯೂ ನಾನು ಸಮರ್ಥಳಾಗಲಿಲ್ಲ. ೩೮. ತಾವಾಗಿಯೇ ಪ್ರೀತಿಸಿ ನಲ್ಲರ ಹಿಂದೆ ಹೋಗಲಿರುವ ಅನೇಕ ಹೆಂಗಸರೂ ಇದ್ದಾರೆ. ಹಾಗೆಯೇ ಪ್ರಿಯಕರನಲ್ಲಿ ಪ್ರಣಯವು ಹೆಚ್ಚಾಗಲು ನಾಚಿಕೆಗೆಟ್ಟವರೂ ಇದ್ದಾರೆ. ಆದರೆ ಈ ಪ್ರಪಂಚದಲ್ಲಿ ನನ್ನ ಹಾಗೆ ರೂಪವನ್ನು ಕಂಡೊಡನೆಯೆ ಇದ್ದಕ್ಕಿದ್ದ ಹಾಗೆ ಲಜ್ಜೆಗೆಟ್ಟು. ಅರಿವುಗೆಟ್ಟು, ದಿಕ್ಕೆಟ್ಟು, ಎದೆಗೆಟ್ಟವರು ಯಾರಾದರೂ ಇದ್ದಾರೆಯೆ? ಎಂದು ನನ್ನಲ್ಲಿ ನಾನೇ ಆಶ್ಚರ್ಯಪಟ್ಟೆನು. ವ|| ಹಾಗೆ ಆಶ್ಚರ್ಯಪಟ್ಟು ನನ್ನನ್ನು ನಾನೇ ಸಮಾಧಾನಪಡಿಸಿಕೊಂಡು, ೩೯. ನನ್ನ ಬುದ್ಧಿಯು ನನ್ನ ಹತೋಟಿಯನ್ನು ಮೀರುವುದಕ್ಕೆ ಮೊದಲೆ, ಬೆಲೆ ಕಳೆದುಕೊಳ್ಳುವುದಕ್ಕೆ ಮೊದಲೆ, ಈ ಸ್ಥಳದಿಂದ ನಾನು ತೊಲಗಿಹೋಗುವುದೇ ಒಳ್ಳೆಯದು. ಇಲ್ಲದಿದ್ದರೆ ಇವನುತನಗೆ ಇಷ್ಟವಿಲ್ಲದ ನನ್ನ ಕಾಮವಿಕಾರಗಳನ್ನು ನೋಡಿ ಅಯ್ಯೋ ಪಾಪ! ಏನೋ ಮನಸೋತಿದ್ದಾಳೆಎಂದು ಕನಿಕರಿಸದೆ ಹಾಗೆಯೆ ಶಾಪವನ್ನು ಕೊಟ್ಟರೂ ಕೊಡಬಹುದು. ಋಷಿಗಳು ಸಾಮಾನ್ಯವಾಗಿ ಕೋಪಿಷ್ಠರೇ ಅಲ್ಲವೆ? || ಎಂದು ಹಿಂದಿರುಗಲು ಪ್ರಯತ್ನಪಟ್ಟು ಸರ್ವರಿಗೂ ಪೂಜಾರ್ಹರಾದ ಮುನಿಗಳನ್ನು ಕಡೆಗಣಿಸಿ ಹೋಗಬಾರದೆಂದು, ೪೦. ಮುಂಗುರುಳುಗಳಲ್ಲಿ ಮುಡಿದುಕೊಂಡಿದ್ದ ಸುಂದರವಾದ ಹೂವುಗಳು ಕೆನ್ನೆಯ ಮೇಲೆ ಜೋಲಾಡಿ ಚೆನ್ನಾಗಿ ಶೋಭಿಸುತ್ತಿರಲಾಗಿ, ಮೃದುವಾದ ಚಿಗುರುಗಳಿಂದ ಕೂಡಿರುವ ಮನೋಹರವಾದ ಕಿರಿಯೋಲೆಯ ಹೆಗಲಿನ ಮೇಲೆ ನಲಿದಾಡುತ್ತಿರಲಾಗಿ ನಾನು ಮತ್ತೆ ಮತ್ತೆ ಎವೆಯಿಕ್ಕದೆ ಆ ಮುನಿಕುಮಾರನ ಸುಂದರವಾದ ಮುಖವನ್ನು ನೋಡುತ್ತಾ ಒಲುಮೆಯಿಂದ ನಮಸ್ಕರಿಸಿದೆನು. ವ|| ಬಳಿಕ ೪೧. ಮನ್ಮಥನನ್ನು ಜಯಿಸಲು ಸಾಧ್ಯವಿಲ್ಲದುದರಿಂದಲೂ, ಇಂದ್ರಿಯಗಳನ್ನು ತಡೆಯಲು ಅಸಾಧ್ಯ ವಾದುದರಿಂದಲೂ, ವಸಂತಕಾಲವು ಮದವನ್ನುಂಟು ಮಾಡುವುದರಿಂದಲೂ, ಆ ಪ್ರದೇಶವು ಬಹಳ ರಮಣೀಯವಾಗಿದ್ದುದರಿಂದಲೂ, ಒಟ್ಟಿನಲ್ಲಿ ನನಗೂ ಈ ಬಗೆಯ ದುಖವುಂಟಾಗುವ ಯೋಗವಿದ್ದುದರಿಂದಲೂ, ಆ ತರುಣಮುನಿಯು ನನ್ನ ವಿಕಾರಗಳನ್ನು ಗಮನಿಸಿ ನೋಡುತ್ತಿರಲಾಗಿ ಮನ್ಮಥನು ಅವನ ಮನಸ್ಸನ್ನು ಗಾಳಿಗೊಡ್ಡಿದ ದೀಪಜ್ವಾಲೆಯಂತೆ ಅಳ್ಳಾಡಿಸಿಬಿಟ್ಟನು. ವ|| ಹಾಗೆ ಮಾಡಲಾಗಿ, ೪೨. ಮನಸ್ಸು ನನ್ನ ಕಡೆಗೆ ಬರುತ್ತಿರಲಾಗಿ, ದಾರಿ ತೋರಿಸುವುದಕ್ಕಾಗಿ ಮುಂದೆ ಬರುತ್ತಿರುವಂತೆ ಅರನ ಶ್ವಾಸವು ದೀರ್ಘವಾಯಿತು. ತಟ್ಟನೆ ಬರುತ್ತಿರುವ ಕಾಮಿನಿಗೆ ಪ್ರೀತಿಯಿಂದ ಎದುರುಗೊಳ್ಳುವುದಕ್ಕಾಗಿಯೇ ಎಂಬಂತೆ ರೋಮಾಂಚನವು ಕೂಡಲೆ ಕಾಣಿಸಿಕೊಂಡಿತು. ಇದುವರೆಗೆ ಆಚರಿಸುತ್ತಿದ್ದ ದೃಢಬ್ರಹ್ಮಚರ್ಯವ್ರತವು ಇನ್ನು ನಾಶವಾಗುತ್ತದೆ ಎಂಬ ಹೆದರಿಕೆಯಿಂದಲೋ ಎಂಬಂತೆ ಅವನ ಕೈಯಲ್ಲಿ ಶೋಭಿಸುತ್ತಿದ್ದ ಜಪಸರವು ಬಹಳ ಸೋಜಿಗವಾಗುವಂತೆ ನಡುಗುತ್ತಿತ್ತು. (ಟಿ. ಅವನಿಗೂ ಕಾಮಪರವಶತೆಯ ಪರಿಣಾಮವಾಗಿ ನಿಶ್ವಾಸ, ರೋಮಾಂಚನ ಕಂಪನಗಳುಂಟಾದುವು). ವ|| ಅದಲ್ಲದೆ, ೪೩. ಈ ಪಾರಿಜಾತಮಂಜರಿಗಿಂತಲೂ ಬೇರೆಯದಾದ ವಸಂತಕಾಲದಲ್ಲಿ ಬಿಡುವ ಮತ್ತೊಂದು ಹೂವಿನ ಗೊಂಚಲು ಶೋಭಿಸುತ್ತಿದೆಯೋ ಎಂಬಂತೆ ಅವನ ಕೆನ್ನೆಯ ಮೇಲೆ ಬೆವರಿನ ಹನಿಗಳು ಮೂಡಿ ಹರಡಿಕೊಂಡವು. ೪೪. ಅವನು ಮನಸ್ಸಿನ ಒಂದು ಅಕ್ಕರೆಯಿಂದ ನನ್ನನ್ನೇ ಕಣ್ಣೆತ್ತಿ ನೋಡುತ್ತಿದ್ದನು. ಅವನ ಕಣ್ಣಿನ ಅತ್ಯಕವಾದ ಬಿಳುಪು ಆ ಸ್ಥಳವನ್ನೆಲ್ಲಾ ಬಿಳಿಯ ಕಮಲಗಳಿಂದ ತುಂಬಿಕೊಂಡಿರುವಂತೆ ಮಾಡಿದ್ದಿತು. ಇದರಿಂದ ಬಿಳಿಯ ತಾವರೆಗಳ ಗುಂಪು ಅಚ್ಛೋದಸರೋವರವನ್ನು ಬಿಟ್ಟು ಮೇಲಕ್ಕೆ ಬಂದು ಆಕಾಶದಲ್ಲಿ ಸೇರಿಕೊಂಡಿದೆಯೋ ಎಂಬಂತೆ ನಾಲ್ಕು ದಿಕ್ಕುಗಳಲ್ಲೂ ಹರಡಿಕೊಂಡಿದ್ದಿತು. ವ|| ಆಗ ನಾನು ನನ್ನಲ್ಲೇ ಹೀಗೆ ಬಹಳವಾಗಿ ಆಲೋಚಿಸಿದೆನು. ಸುರತವಿನೋದದ ನಾಟ್ಯಕ್ಕೆ ಗುರುವಾದ ಮನ್ಮಥನೇ ಈ ಬಗೆಯ ಚೇಷ್ಟೆಗಳನ್ನೆಲ್ಲಾ ಕಲಿಸಿಕೊಡುವ ಉಪಾಧ್ಯಾಯನಾಗಿರಬೇಕು. ಹಾಗಿಲ್ಲದಿದ್ದರೆ ಸಂಭೋಗಸುಖವೆಂದರೇನು? ಎಂಬುದನ್ನೇ ಅರಿಯದಿರುವ ಈ ಋಷಿಪುತ್ರನ ದೃಷ್ಟಿಗೆ ಅಮೃತವನ್ನು ಸುರಿಸುವಂತಿರುವ ರೀತಿಯೂ, ಉಕ್ಕಿ ಹರಿಯುತ್ತಿರುವ ಶೃಂಗಾರರಸವೂ, ಆನಂದಬಾಷ್ಪವನ್ನು ಸುರಿಸುವಿಕೆಯೂ, ಸಂತೋಷದ ಹೊರೆಯಿಂದ ನಡುಗುವಂತೆ ಚಲಿಸುವ ಒಂದು ಬಗೆಯೂ, ಸ್ವಲ್ಪವೂ ಅತ್ತಿತ್ತ ಮಿಸುಕಾಡದೆ ನನ್ನ ಮೇಲೆ ಬೀಳಲಾಗಿ ಹೂ ಬಿಟ್ಟಿದೆಯೋ ಎಂಬಂತಿರುವ ಬಳ್ಳಿಹುಬ್ಬಿನ ತುದಿಯಿಂದ ಕೂಡಿ ನಿದ್ರೆಯನ್ನು ಒಳಗೊಡಂತಿರುವ ಜಡತನವು ತುಂಬಿಕೊಂಡಿರುವ ಮದವನ್ನು ಹೊರಪಡಿಸುವಿಕೆಯೂ, ಬಳಲಿದಂತೆ ಜೋಲು ಬೀಳುವಿಕೆಯೂ ಮೊದಲು ಅಭ್ಯಾಸವಿಲ್ಲದ ಇದಕ್ಕೆ ಹೇಗೆ ಬಂತು? ಎಂದು ಆಲೋಚಿಸಿ ನೋಡುತ್ತಾ, ಅವನಲ್ಲಿ ಇಷ್ಟುಮಟ್ಟಿಗೆ ಅವಕಾಶ ದೊರಕಿದ್ದರಿಂದ ಮೆಲ್ಲನೆ ಹತ್ತಿರಕ್ಕೆ ಹೋದೆನು. ೪೫. ಅವನ ಜೊತೆಯಲ್ಲಿದ್ದ ಋಷಿಕುಮಾರನಿಗೆ ನಮಸ್ಕಾರವನ್ನು ಮಾಡಿ ಈ ತರುಣಮುನಿಯ ಹೆಸರೇನು? ಈತನು ಯಾರ ಮಗ? ಇವನು ಕಿವಿಯಲ್ಲಿ ಮುಡಿದಿರುವ ಹೂವು ಈ ಭೂಲೋಕದಲ್ಲಿ ಬಹಳ ಅಪೂರ್ವವಾದುದು. ಇದು ಯಾವ ಶ್ರೇಷ್ಠವಾದ ಮರದ ಹೂಗೊಂಚಲಿನಿಂದ ಕೊಯ್ದು ಬಂದಿದ್ದು? ಇದನ್ನೆಲ್ಲಾ ತಿಳಿಸಬೇಕು. ನನಗೆ ಬಹಳ ಆಶ್ಚರ್ಯವಾಗಿದೆ ಎಂದು ಬಹಳ ಸಲಿಗೆಯಿಂದ ಕೇಳಿದೆನು. ವ|| ಹಾಗೆ ಕೇಳಲಾಗಿ, ೪೬. ಆಗ ಆ ಮುನಿಯು ನಸುನಗುತ್ತ ಎಲೈ ಹುಡುಗಿಯೆ, ಇದನ್ನು ನೀನುಯಾವ ಉದ್ದೇಶದಿಂದ ಕೇಳುತ್ತೀಯೋ? ಆಗಲಿ ನಿನಗೆ ಇಷ್ಟು ಕುತೂಹಲವಿದ್ದರೆ ಹೇಳುತ್ತೇನೆ, ಕೇಳುಎಂದು ಹೇಳಲು ತೊಡಗಿದನು. ವ|| ಅದು ಹೇಗೆಂದರೆ, ಸ್ವರ್ಗಲೋಕದಲ್ಲಿ ಋಷಿಗಳೆಲ್ಲರಿಂದಲೂ ನಮಸ್ಕರಿಸಲ್ಪಡುವ ಪಾದವುಳ್ಳ ಮುನಿಗಳೆಲ್ಲರಿಗೂ ಸಂತೋಷವನ್ನುಂಟುಮಾಡುವ ಶ್ರೇಷ್ಠವಾದ ಸಮಸ್ತ ವಿದ್ಯೆಗಳಲ್ಲೂ ಪಾರಂಗತನಾದ ಹಾಗೂ ಬಹಳ ಸುಂದರನಾದ ಶ್ವೇತಕೇತುವೆಂಬ ಮಹರ್ಷಿಯಿದ್ದನು. ಅವನುಒಂದು ದಿವಸ ಸ್ನಾನಮಾಡವುದಕ್ಕಾಗಿ ಪುಂಡರೀಕವೆಂಬ ಸರೋವರಕ್ಕೆ ಬಂದಿರಲಾಗಿ, ೪೭. ಆ ತಾವರೆಗೊಳದ ದಟ್ಟವಾದ ಕಮಲಗಳ ಗುಂಪಿನ ನಡುವೆ ಪ್ರಕಾಶಮಾನವಾಗಿಯೂ ಅಗಲವಾಗಿಯೂ ಇರುವ ಒಂದು ಬಿಳಿಯ ಕಮಲದಲ್ಲಿ ಲಕ್ಷೀದೇವಿಯು ಸಂತೋಷದಿಂದ ಸ್ಥಿರವಾಗಿ ನೆಲೆಸಿದ್ದಳು. ಅವಳು ತಾವರೆಗೊಳದ ದಡದಲ್ಲಿ ನಿಂತುಕೊಂಡಿದ್ದ ಸರ್ವಾಂಗಸುಂದರನಾದ ಆ ದೇವರ್ಷಿಯನ್ನು ಬಹಳ ಆಸಕ್ತಿಯಿಂದ ನೋಡಿದಳು. ವ|| ಹಾಗೆ ನೋಡಲಾಗಿ, ೪೮. ನೋಡಿದ ಕೂಡಲೇ ತಾನು ಕುಳಿತುಕೊಂಡಿದ್ದ ಬಿಳಿದಾವರೆಯಲ್ಲೇ ಮಾನಸಿಕವಾಗಿ ಸಂಭೋಗಸುಖವನ್ನು ಅನುಭವಿಸಿದಳು. ಆ ಮಾನಸಿಕಸುಖವೇ ಸಾರ್ಥಕವಾಯಿತು, ಗರ್ಭವುಂಟಾಯಿತು. ಕೂಡಲೆ ಕಣ್ಣಿಗೆ ಆನಂದವನ್ನುಂಟುಮಾಡುವ ಪರಮಸುಂದರವಾದ ಮಗುವೊಂದು ಹುಟ್ಟಿತು. ಅದನ್ನು ನೋಡಿ ಎತ್ತಿಕೊಂಡು ಮಹರ್ಷಿಗಳೆ ಇದು ನಿಮ್ಮ ಮಗುಎಂದು ಪ್ರೀತಿಯಿಂದ ಅವನಿಗೆ ಆ ಮಗುವನ್ನು ಒಪ್ಪಿಸಿದಳು. ವ|| ಆಗ ಅವನು ಯೋಗದೃಷ್ಟಿಯಿಂದ ನೋಡಿ ತನ್ನ ಆ ಮಗುವನ್ನು ಪರಿಗ್ರಹಿಸಿ ಹುಟ್ಟಿದಾಗ ಮಾಡಬೇಕಾದ ಜಾತಕರ್ಮವೇ ಮೊದಲಾದ ಸಂಸ್ಕಾರಗಳನ್ನು ನೆರವೇರಿಸಿ, ಪುಂಡರೀಕ (ಬಿಳಿಯ ಕಮಲ)ದಲ್ಲಿ ಹುಟ್ಟಿದ್ದರಿಂದ ಅದಕ್ಕೆ ಅನುಸಾರವಾಗಿ ಪುಂಡರೀಕನೆಂಬ ಹೆಸರನ್ನಿಟ್ಟನು. ಬಳಿಕ ಎಳೆತನವು ಕಳೆಯಲು ಸಮಸ್ತ ವಿದ್ಯೆಗಳಲ್ಲೂ ಪಾರಂಗತನನ್ನಾಗಿ ಮಾಡಿ ಬ್ರಹ್ಮಚರ್ಯವ್ರತಧಾರಿಯನ್ನಾಗಿ ಮಾಡಿದನು. ಬಳಿಕ ಈ ಮಹಾನುಭಾವನು ಆ ವ್ರತಾನುಷ್ಠಾನದಲ್ಲೇ ನಿರತನಾಗಿದ್ದಾನೆ. ಈಗ ಇವನಿಗೆ ವ್ರತವಿರುದ್ಧವಾದ ಹೂಗೊಂಚಲು ಹೇಗೆ ಬಂತು ಎಂದರೆ, ೪೯. ಈ ದಿವಸ ಚತುರ್ದಶಿಯಾದುದರಿಂದ ಕೈಲಾಸಪತಿಯಾದ ಪರಮೇಶ್ವರನನ್ನು ದರ್ಶನಮಾಡಬೇಕೆಂದು ಸಂತೋಷದಿಂದ ನಾವಿಬ್ಬರೂ ಒಟ್ಟಿಗೆ ಸ್ವರ್ಗಲೋಕದಿಂದ ಬರುತ್ತಿರಲಾಗಿ, ಕೂಡಲೆ ೫೦. ವನದೇವತೆಯೊಬ್ಬಳು ಹೂವಿನ ಒಡವೆಗಳಿಂದಲೇ ಸಿಂಗರಿಸಿಕೊಂಡು, ಹೊಸ ಹೂವಿನ ಬಂಡನ್ನು ಕುಡಿದು ಮದವೇರಿಸಿದವಳಾಗಿ, ಉಗುರಿನ ಕಾಂತಿಗಳನ್ನು ಬೀರುತ್ತಿರುವ ತನ್ನ ಕೈಯನ್ನು ವಸಂತದೇವತೆಯ ಕೈಯಲ್ಲಿಟ್ಟು, ಪಾರಿಜಾತದ ಒಂದು ಸೊಗಸಾದ ಹೂಗೊಂಚಲನ್ನು ಹಿಡಿದುಕೊಂಡು ನಂದನವನದಲ್ಲಿ ಬರುತ್ತಿದ್ದಳು. ವ|| ಹಾಗೆ ಬಂದು ನಮಸ್ಕರಿಸಿ, “ಪೂಜ್ಯರೆ, ಮೂರು ಲೋಕಗಳಲ್ಲೂ ಪರಮರಮಣೀಯವಾದ ನಿಮ್ಮ ಸೌಂದರ್ಯಕ್ಕೆ ಈ ದಿವ್ಯವಾದಹೂಗೊಂಚಲು ಚೆನ್ನಾಗಿ ಒಪ್ಪುವ ಒಡವೆಯಾಗಿದೆ. ಇದನ್ನು ಕಿವಿಯಲ್ಲಿ ಮುಡಿದುಕೊಳ್ಳಿ. ಪಾರಿಜಾತದ ಜನ್ಮವು ಸಾರ್ಥಕವಾಗಲಿ ಎಂದು ಅರಿಕೆ ಮಾಡಿದಳು. ಆಗ ಈ ಕುಮಾರನು ತನ್ನ ಸೌಂದರ್ಯದ ಹೊಗಳಿಕೆಗೆ ನಾಚಿಕೆಪಟ್ಟು ಕೇಳಿಸಿಕೊಳ್ಳದವನಂತೆ ಹೆಜ್ಜೆ ಹಾಕುತ್ತಿದ್ದನು. ಅವಳು ಬಿಡದೆ ಬೆನ್ನ ಹಿಂದೆಯೇ ಬರುತ್ತಿರುವುದನ್ನು ನಾನು ನೋಡಿ, “ಗೆಳೆಯ! ಸ್ವಲ್ಪ ದಯೆಯಿಂದ ಈ ಹೆಂಗಸಿಗೆ ಸಂತೋಷವಾಗುವಂತೆ ಮಾಡಬಾರದೆ?” ಎಂದೆನು. ಅವನು, “ಇದೇಕೆ ನನಗೆ? ಬೇಡ ಬೇಡ!ಎಂದು ಅವನು ಹೇಳುತ್ತಿದ್ದರೂ ಬಿಡದೆ ಅವಳು ಅದನ್ನು ಇವನ ಕಿವಿಗೆ ಮುಡಿಸಿ, ಹೊರಟುಹೋದಳುಎಂದು ಒಡನಾಡಿಯಾದ ಮುನಿಯು ಹೇಳುತ್ತಿರಲಾಗಿ ಪುಂಡರೀಕನು ತುಟಿ ಮತ್ತು ಕೆನ್ನೆಗಳಿಂದ ನಸುನಗೆಯನ್ನು ತೋರ್ಪಡಿಸುತ್ತ ೫೧. ಈ ಹೂಗೊಂಚಲಿಗೆ ಆಸೆಪಟ್ಟಿದ್ದೀಯೆ. ಹಾಗಾದರೆ ತೆಗೆದುಕೊ, ಪ್ರಕಾರಾಂತರದಿಂದ ತಿಳಿಸುವುದೇತಕ್ಕೆ?” ಎಂದು ಹೇಳಿ ತನ್ನ ಕಿವಿಯಿಂದ ಬೇರ್ಪಡಿಸಿ ತೆಗೆದು, “ನಾನು ನಿನ್ನಲ್ಲಿ ಅನುರಕ್ತನಾಗಿದ್ದೇನೆ. ನನಗೆ ರತಿಸುಖವನ್ನು ನೀಡುಎಂದು ದುಂಬಿಗಳ ಧ್ವನಿಯ ಮೂಲಕ ಹೇಳುವ ರೀತಿಯಲ್ಲಿ ನಕ್ಷತ್ರಪುಂಜದಂತೆ ಪ್ರಕಾಶಮಾನವಾದ ಹೂವಿನ ಗೊಂಚಲನ್ನು ಬಹಳ ಉತ್ಸಾಹದಿಂದ ನನ್ನ ಕಿವಿಗೆ ಮುಡಿಸಿದನು. ೫೨. ಇನ್ನು ಹೇಳುವುದೇನು? ನನ್ನ ಕೆನ್ನೆಯ ಅಲ್ಪಸ್ಪರ್ಶದಿಂದಲೇ ಉಂಟಾದ ಸುಖದಿಂದ ಅವನ ಕೈ ಬಹಳವಾಗಿ ನಡುಗುತ್ತಿತ್ತು. ಅವನ ನಾಚಿಕೆಯ ಜೊತೆಯಲ್ಲೇ ಸಟಿಕದ ಜಪಸರವೂ ಜಾರಿ ಕೆಳಕ್ಕೆ ಬಿತ್ತು. (ಟಿ. ನಾಚಿಕೆಯೂ ಇಲ್ಲದಂತಾಯಿತು. ಜಪಸರವೂ ಕೆಳಕ್ಕೆ ಬಿತ್ತು). ವ|| ಹಾಗೆ ಕೆಳಕ್ಕೆ ಬಿದ್ದುದನ್ನೂ ಅವನು ತಿಳಿದುಕೊಳ್ಳದಿರಲಾಗಿ ೫೩. ಅದು ನೆಲಕ್ಕೆ ಬೀಳುವಷ್ಟರಲ್ಲಿ ನಾನು ಆ ಜಪಸರವನ್ನು ಹಿಡಿದುಕೊಂಡು ಪ್ರಕಾಶಮಾನವಾದ ಹಾರವನ್ನು ಹಾಕಿಕೊಳ್ಳುವಂತೆ ಕೊರಳಿಗೆ ಹಾಕಿಕೊಂಡನು. ಆಗ ನಾನು ಆ ಮುನೀಶ್ವರನು ತೋಳುಗಳಿಂದ ನನ್ನನ್ನು ತಬ್ಬಿಕೊಂಡಷ್ಟು ಆನಂದವನ್ನು ಅನುಭವಿಸಿದೆನು. ವ|| ಆ ಸಂದರ್ಭದಲ್ಲಿ ನನ್ನ ಛತ್ರಿ ಹಿಡಿಯುವ ಊಳಿಗದವಳು ಬಂದು ನೋಡಿ, ೫೪. ಅಮ್ಮ! ಇನ್ನು ಹೊತ್ತು ಮಾಡಬೇಡ. ಮಹಾರಾಣಿಯವರು ಸ್ನಾನವನ್ನು ಮುಗಿಸಿಕೊಂಡು ಮನೆಗೆ ಹೊರಡಲು ಸಿದ್ಧವಾಗಿದ್ದಾರೆ. ನೀನೂ ಈಗಲೇ ಸ್ನಾನಕ್ಕೆ ಬಾಎಂದು ಹೇಳಿ ನನಗೆ ಸ್ಪಲ್ಪವೂ ಇಷ್ಟವಿಲ್ಲದಿದ್ದರೂ ಹೊಸದಾಗಿ ಹಿಡಿದುಕೊಂಡುಬಂದಿರುವ ಹೆಣ್ಣಾನೆಗೆ ಅಂಕುಶವಿಟ್ಟು ಒಲ್ಲದಿದ್ದರೂ ತಿರುಗಿಸುವಂತೆ ನನ್ನನ್ನು ಎಳೆದುಕೊಂಡು ಹೋದಳು. ವ|| ಹೀಗೆ ಅವಳು ನನ್ನನ್ನು ಬಲಾತ್ಕಾರದಿಂದ ಎಳೆದೊಯ್ಯಲಾಗಿ, ೫೫. ಮನ್ಮಥನ ಬಾಣಗಳ ಸಮೂಹದಿಂದ ಕೀಲಿಸಲ್ಪಟ್ಟಿರುವಂತೆಯೂ, ಅವನ ಮುಖದ ಸೌಂದರ್ಯವೆಂಬ ಕೆಸರಿನಲ್ಲಿ ಮುಳುಗಿರುವಂತೆಯೂ, ಕೆನ್ನೆಯ ಮೇಲೆ ಮೂಡಿರುವ ರೋಮಾಂಚವೆಂಬ ಮುಳ್ಳುಗಳ ತುದಿಗಳಲ್ಲಿ ಒಟ್ಟಿಗೆ ಚುಚ್ಚಿಕೊಂಡಿರುವಂತೆಯೂ, ಸೌಂದರ್ಯವೆಂಬ ತಂತುವಿನಿಂದ ಹೊಲಿಯಲ್ಪಟ್ಟಂತೆಯೂ ಅವನಲ್ಲಿ ನಾಟಿಕೊಂಡಿದ್ದ ನನ್ನ ದೃಷ್ಟಿಯನ್ನು ಬಹಳ ಪ್ರಯತ್ನದಿಂದ ಹಾಗೂ ತಳಮಳದಿಂದ ಎಳೆದುಕೊಂಡೆನು. ವ|| ನಾನು ಅಲ್ಲಿಂದ ಹೊರಡಲಾಗಿ ಕೂಡಲೆ ಗೆಳೆಯನು ಅವನ ಧೈರ್ಯಚ್ಯುತಿಯನ್ನು ನೋಡಿ, ೫೬, “ಮಿತ್ರ, ಪುಂಡರೀಕ! ಕೇವಲ ಪಾಮರರು ಹೋಗುವ ಈ ದಾರಿಯು ನನಗೆ ಯೋಗ್ಯವಲ್ಲ ಎಂಬುದನ್ನು ನೀನು ಮನಸ್ಸಿನಲ್ಲಿ ಸ್ವಲ್ಪವೂ ವಿಚಾರಮಾಡದೆ ಶಾಂತಿಯನ್ನು ಕಳೆದುಕೊಂಡುಬಿಟ್ಟೆ! ನಿನ್ನ ತಿಳಿವಳಿಕೆ ಎಲ್ಲಿ ಹೋಯಿತು? ಹೀಗೆ ಎದೆಗೆಟ್ಟು ಪರವಶನಾಗಬಹುದೆ? ಗೆಳೆಯ, ನಿನಗೆ ಈಗ ತಟ್ಟನೆ ಈ ಇಂದ್ರಿಯಗಳ ಕ್ಷೋಭೆಯು ಎಲ್ಲಿಂದ ಬಂತು? ೫೭. ನಿನ್ನ ಧೈರ್ಯವು ಎಲ್ಲಿ ಹೋಯಿತು? ನಿನ್ನ ಶಾಂತಿಯು ಎಲ್ಲಿ ಹೋಯಿತು? ನಿನ್ನ ಇಂದ್ರಿಯನಿಗ್ರಹವು ಎಲ್ಲಿ ಹೋಯಿತು? ನಿನ್ನ ಗಟ್ಟಿತನವು ಎಲ್ಲಿ ಹೋಯಿತು? ಸಾಂಸಾರಿಕ ಸುಖಗಳ ವಿಷಯದಲ್ಲಿದ್ದ ತಿರಸ್ಕಾರವು ಎಲ್ಲಿ ಹೋಯಿತು? ೫೮. ನಿನ್ನ ವೇದರಾಶಿ ಎಲ್ಲಿ? ನಿನ್ನ ಬ್ರಹ್ಮಚರ್ಯ ಎಲ್ಲಿ? ನಿನ್ನ ಶಾಸ್ತ್ರಜ್ಞಾನವು ಎಲ್ಲಿ? ನಿನ್ನ ಯತಿತ್ವವು ಎಲ್ಲಿ? ಹರಯದ ಮೇಲಿನ ಹತೋಟಿಯು ಈಗ ಎಲ್ಲಿ ಹೋಯಿತು?” || ಎಂದು ಬಿಡದೆ, ೫೯. ಭೋಗಲಾಲಸೆಯು ನಿನ್ನಂತಹವರನ್ನೂ ಬಹಳಮಟ್ಟಿಗೆ ಈ ರೀತಿ ಮಾಡಿಬಿಟ್ಟರೆ ಇನ್ನು ಶಾಸ್ತ್ರಗಳನ್ನು ಓದಿ ಪಡೆದ ವಿವೇಕವು ವ್ಯರ್ಥವಾಯಿತು. ವೇದಶಾಸ್ತ್ರಗಳಿಗೆ ಬೆಲೆಯೇನು ಬಂತು? ೬೧. ಕಪಿಂಜಲ”! ಹೀಗೆ ನೀನು ಒಂದೊಂದಕ್ಕೆ ಗಂಟುಹಾಕಿ ಬೇರೆ ಏನನ್ನೊ ತಿಳಿದುಕೊಳ್ಳಬೇಡ. ಅವಳು ನನಗೆ ಮೋಸಮಾಡಿದ ತಪ್ಪನ್ನು ನಾನು ಖಂಡಿತ ಸಹಿಸುವುದಿಲ್ಲ. ನೋಡುಎಂದು ಹೇಳುತ್ತ ಕೃತಕಕೋಪದಿಂದ ಎದ್ದು, ೬೨. ಬಹಳ ಪ್ರಯಾಸದಿಂದ ಅವನು ಹುಬ್ಬು ಗಂಟುಹಾಕಿಕೊಂಡನು. ಅವನ ಭಯಂಕರವಾದ ಹುಬ್ಬುಗಂಟೂ ಬಹಳ ರಮ್ಯವಾಗಿ ಕಾಣುತ್ತಿತ್ತು. ನನಗೆ ಮುತ್ತಿಕ್ಕುವ ಆಸೆಯಿಂದಲೋ ಏನೋ ಅವನ ತುಟಿ ಅದುರುತ್ತಿತ್ತು. ಆಗ ಆ ತರುಣಮುನಿಯು ನನ್ನನ್ನು ಕುರಿತು. ೬೩. ಎಲೈ ಚಂಚಲಬುದ್ಧಿಯುಳ್ಳವಳೆ, ನನ್ನ ಜಪಸರವನ್ನು ಕೊಡದೆ ಮುಂದಕ್ಕೆ ಒಂದು ಹೆಜ್ಜೆಯನ್ನೂ ಇಡಬೇಡ!ಎಂದು ಹೇಳಲಾಗಿ ನಾನು ಕೊರಳಿನಲ್ಲಿದ್ದ ಹಾರವನ್ನು ಜಪಸರವೆಂದು ತಿಳಿದು ಕೈಗೆ ತೆಗೆದುಕೊಂಡೆನು. ವ|| ಹೀಗೆ ಮನ್ಮಥನ ನೃತ್ಯಾರಂಭ ವಿನೋದಕ್ಕೆ ನಾಂದಿಯ ಪುಷ್ಪಾಂಜಲಿಯೆನಿಸಿದ ಮುತ್ತಿನ ಸರವನ್ನು ತೆಗೆದುಕೊಟ್ಟೆನು. ಅವನೂ ನನ್ನ ಮುಖದಲ್ಲೇ ನೆಟ್ಟ ದೃಷ್ಟಿಯಿಂದ ಶೂನ್ಯಹೃದಯನಾಗಿ ಅದನ್ನೇ ಜಪಸರವೆಂದು ತಿಳಿದುಕೊಂಡು ತೆಗೆದುಕೊಂಡನು. ನಾನು ಅಲ್ಲಿಂದ ಹೊರಟು ೬೪. ಕಳವಳಗೊಂಡು ಬೆವರಿನಿಂದಲೇ ಸ್ನಾನಮಾಡಿದಂತೆ ಆಗಿದ್ದರೂ ಕೊಳದಲ್ಲಿ ಸ್ನಾನಮಾಡಿದೆನು. ಬಳಿಕ ಸಖಿಯರು ಹರಿಯುವ ನದಿಯನ್ನು ಅಡ್ಡಲಾಗಿ ತಿರುಗಿಸುವಂತೆ ಕೈಲಾಗದಿದ್ದರೂ ಬಹಳ ಕಷ್ಟದಿಂದ ಹೇಗೋ ಬಲಾತ್ಕಾರದಿಂದ ನನ್ನನ್ನು ಮನೆಗೆ ಕರೆದುಕೊಂಡು ಹೋದರು.

अत्र छात्राणामुपयोगाय द्वितीय पि.यू.सि संस्कृतपाठानां टिप्प्ण्यः दीयन्ते. । एषः लघुप्रयत्नः।दोषाः क्षन्तव्याः।











No comments:

Post a Comment